ಅನುರಾಧಪುರ
ಉತ್ತರ ಸಿಲೋನಿನ ಮಧ್ಯಪ್ರಾಂತ್ಯದ ರಾಜಧಾನಿ (ಉತ್ತರ ಅಕ್ಷಾಂಶ 80 20, ಪೂರ್ವ ರೇಖಾಂಶ 800 30. ಕೊಲಂಬೊವಿನಿಂದ ಸುಮಾರು 192 ಕಿ.ಮೀ.ಗಳು. ಕೊಲಂಬೊ ಮತ್ತು ಉತ್ತರ ತಮಿಳರ ಮುಖ್ಯ ನಗರ ಜಾಫ್ನದ ಮಧ್ಯದಲ್ಲಿದೆ. ಜನಸಂಖ್ಯೆ ಸು. 23,000 ಕ್ರಿ. ಪೂ. 5ನೆಯ ಶತಮಾನದಿಂದ ಕ್ರಿ.ಶ. 10ನೆಯ ಶತಮಾನದವರೆಗೆ ಹೆಸರಾಗಿದ್ದ ಸಿಲೋನಿನ ಪ್ರಾಚೀನ ನಗರ. ಈಗಲೂ ಇದು ಬೌದ್ಧರ ಯಾತ್ರಾಸ್ಥಳ. 19ನೆಯ ಶತಮಾನದ ಕೊನೆಯ ಭಾಗದಲ್ಲಿ ಸಿಲೋನ್-ಜಾಫ್ನ ರೈಲ್ವೆಯನ್ನು ಹಾಕಿದುದರಿಂದ ಅನುರಾಧಪುರ ಬೇಗನೆ ಅಭಿವೃದ್ಧಿ ಹೊಂದಿತು. ಸುತ್ತಣ ಕಾಡು ಕಡಿದು ಹೊಸ ಹಾಗೂ ದುರಸ್ತಿಮಾಡಿದ ಕೆರೆಗಳ ಸಹಾಯದಿಂದ ಬತ್ತದ ಬೆಳೆಗೆ ಅನುಕೂಲ ಕಲ್ಪಿಸಲಾಗಿದೆ. ಟಾಲೆಮಿಯ ಭೂಪಟದಲ್ಲಿ ಇದನ್ನು ಅನುರಾಧಗ್ರಾಮನ್ ಎಂದು ಗುರುತಿಸಲಾಗಿದೆ.

15 ಶತಮಾನಗಳವರೆಗೆ ತೊಂಬತ್ತು ಚಕ್ರವರ್ತಿಗಳು ಆಳಿದುದರಿಂದ ಈ ಹೆಸರು ಬಂದಿತೆಂದು ಹೇಳಲಾಗಿದೆ. ಅಶೋಕ ಚಕ್ರವರ್ತಿಯ ಮಗ ಮಹೇಂದ್ರ ಕ್ರಿ. ಪೂ. 2ನೆಯ ಶತಮಾನದಲ್ಲಿ ಇಲ್ಲಿಂದ ಎಂಟು ಮೈಲಿ ಅಂತರದಲ್ಲಿರುವ ಮಹಂತಲೆ ಎಂಬಲ್ಲಿಗೆ ಬೌದ್ಧಮತ ಹಾಗೂ ಧರ್ಮವನ್ನು ತಂದನೆಂದು ನಂಬಲಾಗಿದೆ. ಬುದ್ಧನಿಗೆ ಬೆಳಕು ಕೊಟ್ಟ ಪವಿತ್ರ ಬೋಧಿವೃಕ್ಷದ ಒಂದು ಶಾಖೆಯನ್ನು ತಂದು ಈ ಪಟ್ಟಣದಲ್ಲಿ ಕ್ರಿ.ಪೂ. ದಲ್ಲಿ ನೆಟ್ಟಿದ್ದು ಈಗಲೂ ಇಲ್ಲಿದೆ. ಬುದ್ಧಗಯೆಯಿಂದ ಇದನ್ನು ತರಲಾಯಿತು ಎಂದು ಭಾವಿಸಿದುದರಿಂದ ಈ ನಗರ ಒಂದು ಪುಣ್ಯಸ್ಥಳ ಎನಿಸಿದೆ. 
(ಕೆ.ಕೆ.ಆರ್.)

ಮೌರ್ಯರು ಭಾರತದಲ್ಲಿ ಆಳುತ್ತಿದ್ದಾಗ ದೇವನಾಂಪ್ರಿಯ ಟಿಸ್ಸಾ ಅನುರಾಧಪುರದ ರಾಜನಾಗಿದ್ದ. ಬೌದ್ಧಮತ ಪ್ರಚಾರಕ್ಕೆ ಹೊರಟ ಅಶೋಕನ ಅನೇಕ ಬೌದ್ಧ ಭಿಕ್ಷುಗಳನ್ನು ಬರಮಾಡಿಕೊಂಡು ಇಲ್ಲಿ ಕಲ್ಪಿಸಿಕೊಟ್ಟ. ರಾಜಧಾನಿಯಾಗುವುದಕ್ಕೆ ಎಲ್ಲ ಅನುಕೂಲತೆಗಳೂ ಈ ಪಟ್ಟಣದಲ್ಲಿದ್ದವು. ಮೂಲತಃ ಓಯಾ ನದಿಯ ತೀರದಲ್ಲಿರುವುದರಿಂದ ಇದರ ಕಾಂತಿ ಹೆಚ್ಚು. ಇದು ಸಮುದ್ರತೀರದಿಂದ ದೂರವಿರುವುದರಿಂದ ಶತ್ರುಗಳ ಭಯ ಕಡಿಮೆ. ದೇವನಾಂಪ್ರಿಯ ಕಾಲವಾದಮೇಲೆ ದಕ್ಷಿಣ ಭಾರತದಿಂದ ಕೆಲವು ಆಕ್ರಮಣಕಾರರು ಎರಡು ಬಾರಿ ಸಿಲೋನಿನ ಮೇಲೆ ದಾಳಿಮಾಡಿ ಊರನ್ನು ಲೂಟಿಮಾಡಿದರು. ಎರಡನೆಯ ದಾಳಿಮಾಡಿದವ ಎಲಾರಾ (ಕ್ರಿ. ಪೂ. 145-101) ಎಂಬ ತಮಿಳ. ಸ್ವಲ್ಪಕಾಲ ಪಾಂಡ್ಯರು ತಮ್ಮ ಅಧಿಕಾರವನ್ನು ಇಲ್ಲಿ ಸ್ಥಾಪಿಸಿದ್ದರು. ಅನೇಕ ಕೊಳಗಳನ್ನು ನಿರ್ಮಿಸಲಾಯಿತು. ಕೊಳಗಳನ್ನು ಮತ್ತು ನಾಲೆಗಳನ್ನು ನಿರ್ಮಿಸಿದುದರಿಂದ ವ್ಯವಸಾಯ ಮುಂದುವರಿಯುವುದಕ್ಕೂ ಜನಸಂಖ್ಯೆ ಹೆಚ್ಚಾಗುವುದಕ್ಕೂ ಕಾರಣವಾಯಿತು. 2, 3, ಮತ್ತು 4ನೆಯ ಶತಮಾನಗಳಲ್ಲಿ ಕೊಳಗಳ ನಿರ್ಮಾಣಕಾರ್ಯ ಹೆಚ್ಚಿತು. ಬೌದ್ಧಮತಕ್ಕೆ ಮುಖ್ಯ ಕೇಂದ್ರವಾಗಿದ್ದ ಅನುರಾಧಪುರ ಜೈನಮತದ ಕ್ಷೇತ್ರವೂ ಆಯಿತು. ಅನೇಕ ಬೌದ್ಧ ವಿಹಾರಗಳು ಮತ್ತು ಜೈನ ಬಸದಿಗಳು ನಿರ್ಮಾಣವಾದುವು. ಇದರಲ್ಲಿ ಅಭಯಗಿರಿ ವಿಹಾರ ಬಹಳ ರಮ್ಯವಾದದ್ದು. ಅಲ್ಲಿ ಅನೇಕ ದೇವಾಲಯಗಳಿರುವುದರಿಂದ ಅದು ಒಂದು ಪವಿತ್ರಕ್ಷೇತ್ರವಾಗಿದೆ. ಬೌದ್ಧಭಿಕ್ಷುಗಳ ನಿವಾಸವಾಗಿದೆ. ಪಲ್ಲವರು ಮತ್ತು ಚೋಳರು ಈ ಪಟ್ಟಣದ ಮೇಲೆ ಅನೇಕ ಬಾರಿ ದಾಳಿ ಮಾಡಿದರು. ಪಲ್ಲವ ರಾಜನಾದ ಒಂದನೆಯ ನರಸಿಂಹವರ್ಮ (630-668) ಮಾನವರ್ಮನ ಸಹಾಯಕ್ಕಾಗಿ ಎರಡು ನೌಕಾದಾಳಿಯನ್ನು ಸಿಲೋನಿನ ಮೇಲೆ ನಡೆಸಿದ. ಅನುರಾಧಪುರ ಆಗ ಮಾನವರ್ಮನ ವಶವಾಯಿತು. ಆದರೆ ಅವನ ಅಧಿಕಾರ ಊರ್ಜಿತವಾಗಲಿಲ್ಲ. ಪಾಂಡ್ಯರ ರಾಜನಾದ ಶ್ರೀಮಾರ (815-860) ಅನುರಾಧಪುರದ ಮೇಲೆ ಆಕ್ರಮಣ ಮಾಡಿ, ಅಲ್ಲಿ ದೊರಕಿದ ಐಶ್ವರ್ಯವೆಲ್ಲವನ್ನೂ ದೋಚಿಕೊಂಡು ಹೋದ. ಆನಂತರ ಚೋಳರ ದಾಳಿಗೆ ಸಿಕ್ಕಿ ನಗರ ಮತ್ತಷ್ಟು ಕ್ಷೀಣಗೊಂಡಿತು. ರಾಜರಾಜ (985-1016) ಮತ್ತು ಅವನ ಮಗ ರಾಜೇಂದ್ರಚೋಳ ಇಬ್ಬರೂ ಮತ್ತೆ ದಾಳಿಮಾಡಲಾಗಿ ಮತ್ತೂ ಕ್ಷೀಣಗೊಂಡಿತು. 1017ರಿಂದ 1335ರವರೆಗೆ ಪೋಲನ್ನಾರುವ ನಗರ ಸಿಲೋನಿನ ರಾಜಧಾನಿಯಾದುದರಿಂದ ಅನುರಾಧಪುರ ತನ್ನ ಕಾಂತಿಯನ್ನು ಕಳೆದುಕೊಂಡಿತು. 
(ಬಿ.ಎಂ.) 

ಈ ಪಟ್ಟಣದಲ್ಲಿ ಅನೇಕ ಸ್ತೂಪಗಳು, ತೋಟಗಳು, ಶುಶ್ರೂಷಾಲಯಗಳು ಇದ್ದವು. ಈಗ ಅಲ್ಲಿ 6-7 ಪ್ರಾಚೀನ ಸ್ತೂಪಗಳುಳಿದುಕೊಂಡಿವೆ. ಮುಖ್ಯವಾದ ಅಭಯಗಿರಿ ಸ್ತೂಪ 328 ಎತ್ತರವಿದ್ದು. ಅದರ ಪರಿಘ 1000 ಇದೆ. ಮಹಾವಂಶವೆಂಬ ಗ್ರಂಥ ಈ ಕಟ್ಟಡವನ್ನು ಉಲ್ಲೇಖಿಸುತ್ತದೆ. ಗಾಮಿನಿ ಅಭಯ (ಕ್ರಿ. ಪೂ. 1 ನೆಯ ಶತಮಾನ) ಇದನ್ನು ಮತ್ತು ಇನ್ನೊಂದು ವಿಹಾರವನ್ನು ಕಟ್ಟಿದ. ಕ್ರಿ.ಶ. 2ನೆಯ ಶತಮಾನದಲ್ಲಿ 1ನೆಯ ಗಜಬಾಹು ಇದನ್ನು ಎತ್ತರಿಸಿ ಅದಕ್ಕೆ ನಾಲ್ಕು ಮಹಾದ್ವಾರಗಳನ್ನು ನಿರ್ಮಿಸಿದನೆಂದು ಮಹಾವಂಶದಿಂದ ತಿಳಿಯುವುದು.

ಎರಡನೆಯ ಸ್ತೂಪವನ್ನು ಮಹಾಸೇನರಾಜ ಕಟ್ಟಲು ಪ್ರಾರಂಭಿಸಿದ್ದನ್ನು ಕಿತ್ತರ-ಸಿರಿ-ಮೇಘವಾಹನನು ಪೂರ್ಣಗೊಳಿಸಿದ. ಧೂಪರಾಮ ಡಾಗೊಬ ಮಹತ್ವದ್ದಾಗಿದೆ. ದೇವನಾಂಪ್ರಿಯ ಟಿಸ್ಸಾ ಇದರ ಹತ್ತಿರದ ಒಂದು ವಿಹಾರದಲ್ಲಿ ಭಾರತದಿಂದ ತಂದ ಬುದ್ಧನ ಹಲ್ಲನ್ನು ಇಟ್ಟ. ಇಲ್ಲಿನ ಲೋಹಪಸಾದವೆಂಬ ಕಟ್ಟಡ ಮತ್ತು ಬುದ್ಧನ ಬೃಹದಾಕಾರದ ಪರಿನಿರ್ಮಾಣಶಿಲ್ಪ, ಹಿತ್ತಾಳೆಯ ಅರಮನೆ, ಅನೇಕ ಹಳೆಯ ಡಾಗೊಬಗಳು ಹಾಗೂ ಇನ್ನಿತರ ವಾಸ್ತುಶಿಲ್ಪಗಳಿಗೆ ಪ್ರಸಿದ್ಧಿಪಡೆದ ಪ್ರಾಚೀನ ಅವಶೇಷಗಳು ಇಲ್ಲಿವೆ.

(ಎ.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ